ಕರ್ನಾಟಕದ ಸ್ತಬ್ಧಚಿತ್ರಕ್ಕೆ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅವಕಾಶವೇ ಇಲ್ಲ- ಕಾರಣ ತಿಳಿಯಿರಿ

ಸತತ 13 ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ತನ್ನ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರದರ್ಶಿಸಿದ ನಂತರ ಕರ್ನಾಟಕವು ಈ ಬಾರಿ ಅವಕಾಶವನ್ನು ಕಳೆದುಕೊಂಡಿದೆ.

ಮುಂಬರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಿರಿಧಾನ್ಯಗಳ ವೈವಿಧ್ಯತೆಯನ್ನು ಪ್ರದರ್ಶಿಸುವ ಕರ್ನಾಟಕದ ಪ್ರಸ್ತಾಪವನ್ನು ಕೇಂದ್ರವು ತಿರಸ್ಕರಿಸಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಣಾಮವಾಗಿ, ಜನವರಿ 26 ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ವರ್ಣರಂಜಿತ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಯಾವುದೇ ಪ್ರಾತಿನಿಧ್ಯ ಇರುವುದಿಲ್ಲ ಎಂದು ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಗಳ ಪ್ರಕಾರ, ಟ್ಯಾಬ್ಲೋ ರೇಸ್‌ನ ಅಂತಿಮ ಹಂತದಲ್ಲಿ ಸೋಲು ಅನುಭವಿಸಲಾಗಿದೆ.

‘ತಜ್ಞ ಸಮಿತಿಯ ಮೊದಲ ಕೆಲವು ಆರಂಭಿಕ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ, ನಮ್ಮ ವಿಷಯಾಧಾರಿತ ವಿನ್ಯಾಸ ಮತ್ತು ಸಂಗೀತವು ಮೆಚ್ಚುಗೆಯನ್ನು ಗಳಿಸಿತು. ಆದರೆ, ಕೊನೆಯ ಸುತ್ತಿನಲ್ಲಿ, ನಾವು ಸೋತಿದ್ದೇವೆ’ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಇದಲ್ಲದೇ ಈ ಹಿಂದೆ, ತಮಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಹಲವಾರು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿವೆ. ಹಲವು ವರ್ಷಗಳಿಂದ ಸಮಿತಿ ಮತ್ತು ಕೆಲವು ರಾಜ್ಯಗಳಿಗೆ ಮಾತ್ರ ತಮ್ಮ ಸ್ತಬ್ಧಚಿತ್ರಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕವು ಈ ಹಿಂದೆ ತನ್ನ ಸ್ತಬ್ಧಚಿತ್ರಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಸೃಜನಶೀಲತೆ ಮತ್ತು ವರ್ಣರಂಜಿತ ಪ್ರಸ್ತುತಿಗಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ. 2022 ರಲ್ಲಿ, ಕರ್ನಾಟಕದ ಸ್ತಬ್ಧಚಿತ್ರವು ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿತ್ತು. ಇದು ಎರಡನೇ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿತ್ತು. ಕರ್ನಾಟಕದ ಸ್ತಬ್ಧಚಿತ್ರಗಳು ಹೆಚ್ಚಾಗಿ ರಾಜ್ಯದ ಶ್ರೀಮಂತ ಜಾನಪದ, ಜೀವವೈವಿಧ್ಯ, ಕರಕುಶಲ ಮತ್ತು ಸಾಂಸ್ಕೃತಿಕ ಪರಂಪರೆಯ ಸುತ್ತ ಕೇಂದ್ರೀಕೃತವಾಗಿವೆ.

ಈ ಮಧ್ಯೆ, ಸ್ತಬ್ಧಚಿತ್ರ ಆಯ್ಕೆಯ ಸುತ್ತಲಿನ ವಿವಾದಗಳಿಂದ ರಕ್ಷಣಾ ಸಚಿವಾಲಯವು ದೂರವಿರುವ ಯತ್ನ ಮಾಡಿದೆ. ಮೆರವಣಿಗೆಗೆ ಆಯ್ಕೆ ಮಾಡಿದ ಸ್ತಬ್ಧಚಿತ್ರ ಸಂಖ್ಯೆಯನ್ನು ಸರಳಗೊಳಿಸುವುದರ ಜೊತೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಪರಿಷ್ಕರಿಸಿದೆ.

2022 ರಲ್ಲಿ, ಕೇರಳ ಮತ್ತು ತೆಲಂಗಾಣದಂತಹ ರಾಜ್ಯಗಳು ತಮ್ಮ ಸ್ತಬ್ಧಚಿತ್ರಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದವು. ‘ರೋಸ್ಟರ್ ಪ್ರಕಾರ ಪ್ರತ್ಯೇಕ ರಾಜ್ಯದ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವುದಕ್ಕಿಂತ ಭಿನ್ನವಾಗಿ, ದೇಶದಲ್ಲಿ ಕೆಲವು ವಲಯಗಳನ್ನು ವರ್ಗೀಕರಿಸಿದೆ. ಪ್ರತಿ ವಲಯದಿಂದ 2ರಿಂದ 3 ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಿದೆ’ ಎಂದು ರಕ್ಷಣಾ ಸಚಿವಾಲಯದ ಮೂಲ ತಿಳಿಸಿದೆ.

ಆಯ್ಕೆ ಪ್ರಕ್ರಿಯೆಯು ಬಹಳ ಸಮಯ ತೆಗೆದುಕೊಳ್ಳುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಉತ್ತಮ ಸ್ತಬ್ಧಚಿತ್ರಗಳನ್ನು ಶಾರ್ಟ್‌ಲಿಸ್ಟ್ ಮಾಡಲು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಿದ ತಜ್ಞರ ಸಮಿತಿಯನ್ನು ರಕ್ಷಣಾ ಸಚಿವಾಲಯವು ರಚಿಸುತ್ತದೆ.

ಆಯ್ಕೆಯ ಹೊಸ ಸ್ವರೂಪದ ಪ್ರಕಾರ, ಆರು ವಲಯಗಳನ್ನು ರಚಿಸಲಾಗಿದೆ. ನಾಲ್ಕು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ದಕ್ಷಿಣ ವಲಯದಲ್ಲಿ ಕರ್ನಾಟಕವನ್ನು ಇರಿಸಲಾಗಿತ್ತು.

‘ಸಾಮಾನ್ಯವಾಗಿ, ಗಣರಾಜ್ಯೋತ್ಸವ ಪರೇಡ್‌ಗಾಗಿ 15 ಟ್ಯಾಬ್ಲಾಕ್ಸ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಸೂತ್ರದ ಆಧಾರದ ಮೇಲೆ, ನಾವು ಎಂಟು ರಾಜ್ಯಗಳನ್ನು ಹೊಂದಿರುವ ಪ್ರತಿಯೊಂದು ವಲಯದಿಂದ ಮೂರು ಅತ್ಯುತ್ತಮ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ಪರೇಡ್‌ನಲ್ಲಿ ಕನಿಷ್ಠ ಬಾರಿ ಭಾಗವಹಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದ್ಯತೆ ನೀಡಲಾಗಿದೆ’ ಎಂದು ರಕ್ಷಣಾ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

error: Content is protected !!