ಅಕ್ರಮ ಸಂಬಂಧಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಮಹಿಳಾ ಪೊಲೀಸ್​ ಅಧಿಕಾರಿ.. ನಾಲ್ವರ ಬಂಧನ

ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಪತಿ, ಮಾಜಿ ಪೊಲೀಸ್​ ಅಧಿಕಾರಿಯನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಬಂಧಿಸಲಾಗಿದೆ.

ವಿಶೇಷ ಸಬ್​ಇನ್ಸ್​ಪೆಕ್ಟರ್​ ಚಿತ್ರಾ(38)ಬಂಧಿತ ಮಹಿಳಾ ಅಧಿಕಾರಿ. ತಮಿಳುನಾಡಿನ ಸಿಂಗಾರಪೆಟ್ಟೈ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಾಜಿ ಪೊಲೀಸ್ ಅಧಿಕಾರಿ ಸೆಂಥಿಲ್‌ಕುಮಾರ್ (48) ಕೊಲೆಯಾದವರು.

ಪೊಲೀಸ್​ ಅಧಿಕಾರಿಯಾಗಿದ್ದ ಸೆಂಥಿಲ್​ಕುಮಾರ್​ ಕ್ರಿಮಿನಲ್​ ಪ್ರಕರಣಗಳಲ್ಲಿ ಭಾಗಿಯಾದ್ದಕ್ಕೆ 2012 ರಲ್ಲಿ ಕೆಲಸದಿಂದ ವಜಾ ಆಗಿದ್ದರು. ಬಳಿಕ ಪೊಲೀಸ್​ ಅಧಿಕಾರಿ ದಂಪತಿ ಮಧ್ಯೆ ಬಿರುಕು ಉಂಟಾಗಿ ಸೆಂಥಿಲ್​ಕುಮಾರ್​ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸೆಪ್ಟೆಂಬರ್​ನಲ್ಲಿ ಕಾರ್ಯಕ್ರಮಕ್ಕೆ ಎಂದು ಹೋದ ಸೆಂಥಿಲ್​ಕುಮಾರ್​ ನಾಪತ್ತೆಯಾಗಿದ್ದರು. ಹುಡುಕಾಟದ ಬಳಿಕ ಅವರ ತಾಯಿ ಪೊಲೀಸ್​ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ: ಮಾಜಿ ಪೊಲೀಸ್​ ಅಧಿಕಾರಿ ನಾಪತ್ತೆ ಪ್ರಕರಣದ ಬೆನ್ನು ಬಿದ್ದ ಪೊಲೀಸರಿಗೆ ಸುಳಿವೇ ಸಿಕ್ಕಿರಲಿಲ್ಲ. ಬಳಿಕ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು. ಮೊಬೈಲ್​ ನೆಟ್​ವರ್ಕ್​ ಆಧಾರದ ಮೇಲೆ ತನಿಖೆ ನಡೆಸಿದಾಗ ವಿಶೇಷ ಪಿಎಸ್​ಐ ಆಗಿರುವ ಪತ್ನಿ ಚಿತ್ರಾ ಅವರ ನೂತನ ಗೃಹದಲ್ಲಿ ಸೆಂಥಿಲ್​ಕುಮಾರ್​ ಮೊಬೈಲ್​ ಸ್ವಿಚ್ಡ್​​ ಆಫ್​ ಆಗಿರುವುದು ಗೊತ್ತಾಗಿದೆ. ಇದರ ಜಾಡು ಹಿಡಿದಾಗ ಕೊಲೆಯ ರಹಸ್ಯ ಬಯಲಾಗಿದೆ.

ಮಹಿಳಾ ಅಧಿಕಾರಿ ಚಿತ್ರಾ ಅವರು ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು. ಇದನ್ನರಿತ ಪತಿ ಸೆಂಥಿಲ್​ಕುಮಾರ್​ ವಿರೋಧಿಸಿದ್ದರು. ಅಲ್ಲದೇ, ಇದಕ್ಕಾಗಿ ಹಲವಾರು ಬಾರಿ ಇಬ್ಬರೂ ಕಿತ್ತಾಡಿಕೊಂಡಿದ್ದರು. ಇದರಿಂದ ಬೇಸತ್ತ ಸೆಂಥಿಲ್​ಕುಮಾರ್​ ಚಿತ್ರಾರಿಂದ ಬೇರೆಯಾಗಿದ್ದರು. ಅಕ್ರಮ ಸಂಬಂಧ ಬಯಲಾಗುವ ಭಯದಲ್ಲಿ ಚಿತ್ರಾ ಗಂಡನನ್ನೇ ಕೊಲೆ ಮಾಡಲು ಪುತ್ರ ಜಗದೀಶಕುಮಾರ್​ ಮತ್ತು ಪ್ರಿಯಕರ ಅಮಲ್​ರಾಜ್​ ಜೊತೆ ಸೇರಿ ಸ್ಕೆಚ್​ ಹಾಕಿದ್ದರು.

ಕೊಲೆಗಾಗಿ 7 ಲಕ್ಷಕ್ಕೆ ಸುಪಾರಿ: ಅಕ್ರಮ ಸಂಬಂಧವನ್ನು ಬಿಟ್ಟುಕೊಡಲು ಒಪ್ಪದ ಮಹಿಳಾ ಅಧಿಕಾರಿ ಚಿತ್ರಾ ಗಂಡನನ್ನೇ ಕೊಲೆ ಮಾಡಲು 7 ಲಕ್ಷಕ್ಕೆ ಸುಪಾರಿ ನೀಡಿದ್ದರು. ಅದರಂತೆ ತಾನು ನೂತನವಾಗಿ ನಿರ್ಮಿಸಿದ ಮನೆಯ ಪೂಜೆಗೆ ಎಂದು ಸೆಂಥಿಲ್​ಕುಮಾರ್​ನನ್ನು ಕರೆಸಿದ್ದಾರೆ. ಅಲ್ಲಿ ಪುತ್ರ ಜಗದೀಶ್​ಕುಮಾರ್​, ಪ್ರಿಯಕರ ಅಮಲ್​ರಾಜ್​ ಮತ್ತು ಇನ್ನಿತರ ಗೂಂಡಾಗಳು ಯೋಜನೆಯಂತೆ ಕೊಲೆಗೆ ಸಂಚು ರೂಪಿಸಿದ್ದರು.

ಮನೆಗೆ ಬಂದ ಸೆಂಥಿಲ್​ಕುಮಾರ್​ ಕಣ್ಣಿಗೆ ಕಾರದ ಪುಡಿ ಎರಚಿ ಬಳಿಕ ಕಬ್ಬಿಣದ ರಾಡ್​ನಿಂದ ಬಲವಾಗಿ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಲು ಯೋಚಿಸಿದ್ದರು. ಇದು ಪತ್ತೆಯಾಗುವ ಕಾರಣ, ಯೋಜನೆ ಬದಲಿಸಿ ಅಕ್ಕಿಮೂಟೆಯಲ್ಲಿ ಶವವನ್ನು ಇರಿಸಿ ಬಾವಿಯಲ್ಲಿ ಬಿಸಾಡಿ ಬಂದಿದ್ದರು. ಇದಕ್ಕೆಲ್ಲಾ ಪತ್ನಿ ಚಿತ್ರಾಳ ನೇತೃತ್ವವಿತ್ತು.

ಕೊಲೆ ಬಯಲಾಗಿದ್ದು ಹೇಗೆ? : ಸೆಂಥಿಲ್​ಕುಮಾರ್​ ಕೊಲೆ ಕೇಸ್​ ತನಿಖೆ ನಡೆಸುತ್ತಿದ್ದ ವಿಶೇಷ ತಂಡ ಪುತ್ರ ಜಗದೀಶ್​ಕುಮಾರ್​ ಮತ್ತು ಅಮಲ್​ರಾಜ್​ರನ್ನು ಅನುಮಾನದ ಮೇರೆಗೆ ತೀವ್ರವಾಗಿ ವಿಚಾರಣೆ ನಡೆಸಿದ್ದರು. ಮೊದಮೊದಲು ಬಾಯಿಬಿಡದ ಆರೋಪಿಗಳು ಬಳಿಕ ಕೊಲೆ ಮಾಡಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇಬ್ಬರನ್ನೂ ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದರು.

ಇಷ್ಟಾದರೂ ಪತಿಯ ಕೊಲೆ ಮಾಡಿದ್ದರ ಬಗ್ಗೆ ಪತ್ನಿ ಚಿತ್ರಾ ಮಾತ್ರ ಒಪ್ಪಿಕೊಂಡಿರಲಿಲ್ಲ. ಪ್ರಕರಣದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದೇ ವಾದಿಸಿಕೊಂಡು ಬಂದಿದ್ದರು. ಬಂಧನದಲ್ಲಿದ್ದ ಪುತ್ರ ಜಗದೀಶ್​ಕುಮಾರ್​, ಅಮಲ್​ರಾಜ್​ ನೀಡಿದ ಮಾಹಿತಿಯಂತೆ ಅಕ್ರಮ ಸಂಬಂಧದ ಹಿನ್ನೆಲೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ವಿಶೇಷ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ ಚಿತ್ರಾ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

error: Content is protected !!