ಒಳಗೆ ಬಂದು ಯಾವ ಹುಡುಗಿಯನ್ನಾದರೂ ಆಯ್ದುಕೊಳ್ಳಿ. ಚೆನ್ನೈ ಹೋಟೆಲ್​ನಲ್ಲಿ ಆಫರ್​ ಬೋರ್ಡ್​, ಅಸಲಿಯತ್ತು ಬಯಲು

ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವ ಹುಡುಗಿಯನ್ನಾದರೂ ಸಂಭೋಗಿಸಿ ಎಂದು ಹೋಟೆಲ್​ ಮುಂದೆ ಅಳವಡಿಸಿದ್ದ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕವನ್ನು ಗ್ರೇಟರ್​ ಚೆನ್ನೈ ಪೊಲೀಸರು ಕಳೆದ ಶನಿವಾರ (ಡಿ. 24) ತೆರವುಗೊಳಿಸಿದ್ದು, ಹೋಟೆಲ್​ ಮಾಲೀಕರ​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೆನ್ನೈ ನಾಗರಿಕರೊಬ್ಬರು ಹೋಟೆಲ್​ ಮುಂದಿನ ಡಿಜಿಟಲ್​ ಜಾಹಿರಾತು ಫಲಕವನ್ನು ನೋಡಿ ತಮ್ಮ ಮೊಬೈಲ್​ನಲ್ಲಿ ಫೋಟೋ ಮತ್ತು ವಿಡಿಯೋ ರೆಕಾರ್ಡ್​ ಮಾಡಿ, ಟ್ವಿಟರ್​ನಲ್ಲಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಲಿಟಲ್​ ಮೌಂಟ್​ ಮೆಟ್ರೋ ಬಳಿಯ ಕಂಬವೊಂದರಲ್ಲಿ ಡಿಜಿಟಲ್​ ಜಾಹಿರಾತು ಫಲಕ ಅಳವಡಿಸಲಾಗಿತ್ತು. ಅದರಲ್ಲಿ ಪುರುಷರೇ ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವುದೇ ಹುಡುಗಿಯ ಜೊತೆ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಬರೆಯಲಾಗಿತ್ತು.

ಈ ವಿಚಾರವಾಗಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ರಾಜ್ಯ ಘಟಕದ ಸದಸ್ಯರು ಡಿ.24ರಂದು ಪ್ರತಿಭಟನೆ ನಡೆಸಿ, ಹೋಟೆಲ್​ ಮಾಲೀಕ ಅಥವಾ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕ ಅಳವಡಿಸಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಚೆನ್ನೈ ಪೊಲೀಸರನ್ನು ಒತ್ತಾಯಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಡಿಜಿಟಲ್​ ಜಾಹಿರಾತು ಫಲಕವನ್ನು ತೆಗೆದಿದ್ದು, ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಹೋಟೆಲ್​ನ ವೈ-ಫೈ ನೆಟ್‌ವರ್ಕ್‌ ಹ್ಯಾಕ್​ ಮಾಡಿ ಅಪರಿಚಿತ ವ್ಯಕ್ತಿ ಈ ರೀತಿ ಮಾಡಿದ್ದಾನೆಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ನಮ್ಮ ವೈ ಫೈ ಎಲ್ಲರಿಗೂ ಮುಕ್ತವಾಗಿದೆ. ಯಾವುದೇ ಪಾಸ್​ವರ್ಡ್​ನಿಂದ ನೆಟ್​ವರ್ಕ್​ ಅನ್ನು ಸುರಕ್ಷಿತವಾಗಿ ಇರಿಸಿರಲಿಲ್ಲ ಎಂದಿದ್ದಾರೆ. ಡಿಸ್‌ಪ್ಲೇ ಸಂದೇಶಕ್ಕಾಗಿ ಕೋಡ್‌ಗಳನ್ನು ಬದಲಾಯಿಸುವ ಬಗ್ಗೆ ತಾಂತ್ರಿಕ ಜ್ಞಾನವನ್ನು ಹೊಂದಿರುವ ಯಾರೋ ಕಿಡಿಗೇಟಿ ಡಿಜಿಟಲ್​ ಬೋರ್ಡ್​ ಸಂದೇಶವನ್ನು ಬದಲಾಯಿಸಿದ್ದಾನೆ ಎಂದು ಪೊಲೀಸರು ಹೇಳಿಕೆಯನ್ನು ನೀಡಿದ್ದಾರೆ.

ಹೋಟೆಲ್‌ನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತೆರೆದ ವೈ-ಫೈ ನೆಟ್‌ವರ್ಕ್‌ಗಳ ದುರುಪಯೋಗದ ಬಗ್ಗೆ ಜಾಗೃತರಾಗಿರಲು ಜನರಿಗೆ ಪೊಲೀಸರು ಸಲಹೆ ನೀಡಿದ್ದಾರೆ ಮತ್ತು ವೈ-ಫೈ ಅಥವಾ ವೈರ್ಡ್ ಸಂಪರ್ಕದ ಮೂಲಕ ಫಲಕಕ್ಕೆ ಪ್ರವೇಶವನ್ನು ಮರುಪರಿಶೀಲಿಸಲು ಮತ್ತು ಸುರಕ್ಷಿತವಾಗಿರಿಸಲು ಹೋಟೆಲ್​ ಮಾಲೀಕರನ್ನು ಪೊಲೀಸರು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

error: Content is protected !!