ಕತ್ತಿಯಿಂದ ಕಡಿದು ಮಹಿಳೆಯ ಹತ್ಯೆ: ಅನೈತಿಕ ಸಂಬಂಧದಿಂದ ದೂರಾಗಿದ್ದಕ್ಕೆ ಕೊಂದು ಹಾಕಿದ!

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ (Murder case) ಮಾಡಲಾಗಿದೆ. ಕಸ್ತೂರಿ ತಳವಾರ (38) ಹತ್ಯೆಗೀಡಾದ ಮಹಿಳೆ, ಬಸಪ್ಪ ಚಂದ್ರ ಎಂಬಾತ ಕೊಲೆಗಾರ.

ಜಮೀನಿನಲ್ಲಿ ಕಸ್ತೂರಿಯನ್ನು ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿದ ಆರೋಪಿ ಬಸಪ್ಪಚಂದ್ರ ತಾನೇ ಸ್ವತಃ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಕಸ್ತೂರಿ ತಳವಾರ ಮದುವೆಯಾಗಿ ಸಂಸಾರ ಹೊಂದಿದ್ದಾಳೆ. ಈಕೆ ಮಹಾದೇವಪ್ಪ ಎಂಬಾತನ ಹೆಂಡತಿ. ಆದರೂ ಬಸಪ್ಪ ಚಂದ್ರ ಎಂಬಾತ ಕಳೆದ ಒಂದು ವರ್ಷದಿಂದ ಈಕೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈ ಬಗ್ಗೆ ಊರಿನಲ್ಲಿ ಪಂಚಾಯಿತಿಕೆ ನಡೆದು ಇಬ್ಬರೂ ಇನ್ನು ಮುಂದೆ ಇಂಥ ಅಕ್ರಮ ಸಂಬಂಧ ಹೊಂದಿರುವುದಿಲ್ಲ ಎಂದು ಒಪ್ಪಿಕೊಂಡಿದ್ದರು. ಆದರೂ ಬಸಪ್ಪ ಮಾತ್ರ ಆಗಾಗ ಕಸ್ತೂರಿಯನ್ನು ಬೆನ್ನಟ್ಟುವುದು, ಕಿರುಕುಳ ಕೊಡುವುದು ಮಾಡುತ್ತಿದ್ದ. ಪದೇಪದೆ ಆಕೆಯ ಹಿಂದೆ ಓಡಾಡುವುದರ ಬಗ್ಗೆ ಆರೋಪವಿತ್ತು.

ತನ್ನ ಜತೆ ಸಂಬಂಧ ಹೊಂದಿದ್ದ ಆಕೆ ಈಗ ದೂರ ಸರಿದಿರುವುದರಿಂದ ಆತ ಕೆರಳಿದ್ದ ಎನ್ನಲಾಗುತ್ತಿದೆ. ಭಾನುವಾರ ಸಂಜೆ ಆಕೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೂ ಅಡಿ ಇಟ್ಟಿದ್ದಾನೆ ಆರೋಪಿ ಬಸಪ್ಪ. ಅಲ್ಲೇ ಆಕೆಯ ಜತೆ ಸಂಗ ಬಯಸಿದ್ದ ಆತ. ಆದರೆ, ಆಕೆ ಒಪ್ಪದೆ ಇದ್ದಾಗ ಅಲ್ಲೇ ಕುಡುಗೋಲಿನಿಂದ ಕತ್ತರಿಸಿ ಹಾಕಿದ್ದಾನೆ. ಬಳಿಕ ಅದೇ ಕುಡುಗೋಲಿನೊಂದಿಗೆ ಪೊಲೀಸ್‌ ಠಾಣೆಗೆ ತೆರಳಿ ಶರಣಾಗತನಾಗಿದ್ದಾನೆ.

ಕಸ್ತೂರಿಯ ಪತಿ ಮಹಾದೇವಪ್ಪ ನೀಡಿದ ದೂರಿನ ಆಧಾರದಲ್ಲಿ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

error: Content is protected !!