ಬೈಕ್ ಅಡ್ಡ ಹಾಕಿದ ಪೊಲೀಸ್ರು – ನಡುರಸ್ತೆಯಲ್ಲಿ ಗನ್ ಹಿಡಿದು ಓಡುತ್ತಾ, ಶಾಲೆಗೆ ನುಗ್ಗಿದ ಸರಗಳ್ಳರು

ಬೈಕ್‍ನಲ್ಲಿ ಹೋಗುತ್ತಿದ್ದ ಸರಗಳ್ಳರನ್ನು ಪೊಲೀಸರು ಅಡ್ಡಹಾಕಿದ್ದಾರೆ. ಈ ವೇಳೆ ಧರಿಸಿದ್ದ ಹೆಲ್ಮೆಟ್ ಅನ್ನು ಎಸೆದು ಆರೋಪಿಗಳು ಕೈಯಲ್ಲಿ ಗನ್ ಹಿಡಿದುಕೊಂಡು ನಡು ಬೀದಿಯಲ್ಲಿ ದಿಕ್ಕಾಪಾಲಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿದ್ದಾರೆ.

ದರೋಡೆಯನ್ನು ತಡೆಯಲು ರಚಿಸಲಾಗಿದ್ದ ಜಿಲ್ಲಾ ಪೊಲೀಸರ ತಂಡ ಮಂಗಳವಾರ ಬೆಳಗ್ಗೆ 8:55ರ ಸುಮಾರಿಗೆ, ನಂಬರ್ ಪ್ಲೇಟ್ ಇಲ್ಲದೇ ಹೋಗುತ್ತಿದ್ದ ಬೈಕ್ ಅನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರಿಗೆ ಬಂದೂಕು ತೋರಿಸಿ ಬೆದರಿಸಿದ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಮೊದಲಿಗೆ ಬೈಕ್ ತಡೆದು ವಿಚಾರಣೆ ಪ್ರಾರಂಭಿಸುತ್ತಿದ್ದಂತೆಯೇ ಹೆಲ್ಮೆಟ್ ಧರಿಸಿದ ಇಬ್ಬರು ಓಡಲು ಆರಂಭಿಸಿದರು. ನಾವು ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಅವರಲ್ಲಿ ಒಬ್ಬ ಪಿಸ್ತೂಲ್ ತೆಗೆದುಕೊಂಡು ಪೊಲೀಸರಿಗೆ ಬೆದರಿಕೆ ಹಾಕಿದ್ದ. ಮತ್ತೊಬ್ಬ ಹತ್ತಿರದ ಶಾಲೆಯೊಂದರ ಗೋಡೆಯನ್ನು ಏರಿ ಶಾಲೆಯೊಳಗೆ ನುಗ್ಗಿದ್ದ. ಈ ವೇಳೆ ಕೂಡ ನಾವು ಆತನನ್ನು ಬಂಧಿಸಿದ್ದೇವೆ ಎಂದು ಶಹದಾರ ಡಿಸಿಪಿ ಆರ್ ಸತ್ಯಸುಂದರಂ ಹೇಳಿದ್ದಾರೆ.

ಈ ಘಟನೆಯ ವೀಡಿಯೋ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದು, ಓಡುತ್ತಾ ಆರೋಪಿಗಳು ಹೆಲ್ಮೆಟ್ ಅನ್ನು ಎಸೆಯುವುದನ್ನು ಕಾಣಬಹುದಾಗಿದೆ. ಅಲ್ಲದೇ ಶಾಲೆಯೊಳಗೆ ಜಿಗಿದವನು ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಗನ್ ತೋರಿಸಿ ಬೆದರಿಕೆಯೊಡ್ಡಿದ್ದಾನೆ. ಆದರೆ ಪೊಲೀಸರು ಆತನನ್ನು ಸದೆಬಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!