ಮಗಳ ಫೀಸ್ ಕಟ್ಟಲಾಗದ ಹತಾಶೆ; ವ್ಯಕ್ತಿ ಆತ್ಮಹತ್ಯೆಗೆ ಶರಣು

ಮಗಳ ಕಾಲೇಜು ಶುಲ್ಕವನ್ನು ಕಟ್ಟಲಾಗದ ಪರಿಸ್ಥಿತಿ ಎದುರಾದ ಕಾರಣ ಹತಾಶೆಗೊಂಡ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಜರಾತಿನಲ್ಲಿ ನಡೆದಿದೆ. ಇದು ಈಗ ಆಮ್ ಆದ್ಮಿ ಪಾರ್ಟಿ ಹಾಗೂ ಬಿಜೆಪಿ ನಾಯಕರ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.

ಶನಿವಾರದಂದು ಈ ಘಟನೆ ನಡೆದಿದ್ದು, ಗುಜರಾತಿನ ತಪಿ ನಿವಾಸಿ 46 ವರ್ಷದ ಬಕುಲ್ ಪಟೇಲ್ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಇವರ ಮಗಳ ಕಾಲೇಜು ಶುಲ್ಕವನ್ನು ಭರಿಸಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಇದರ ಮಧ್ಯೆ ಘಟನೆ ಕುರಿತಂತೆ ಮಾತನಾಡಿರುವ ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ, 21ನೇ ಶತಮಾನದಲ್ಲೂ ಗುಜರಾತಿನಲ್ಲಿ ಇಂತಹ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಘಟನೆ ನಡೆದ ಸ್ಥಳದ ವಿಧಾನಸಭಾ ಕ್ಷೇತ್ರದ ಶಾಸಕ ಮೋಹನ್ ದೋಡಿಯಾ, ಆತ್ಮಹತ್ಯೆಗೆ ಶರಣಾದ ವ್ಯಕ್ತಿ ನನಗೆ ಪರಿಚಿತನಿದ್ದು, ಆತನಿಗೆ ಮಗಳ ಕಾಲೇಜಿನ ಶುಲ್ಕದ ಸಮಸ್ಯೆ ಇರಲಿಲ್ಲ. ಆಮ್ ಆದ್ಮಿ ಪಕ್ಷ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

error: Content is protected !!